NARASIMHA DEVARU

 ಹಿರಿದು ಮುಖವನೆ ತೆರೆದು ಜಿಹ್ವೆ ಚಾಚಿದ ದೇವ
ಸಿರಿಯ ಅರಸನೆ ನರ ಸಿಂಗ ಕಾರಣವೇನೋ.

ಪ್ರಲಯ ಕಾಲದಿ ಕುಡಿನೋಟ ವಹ್ನಿ ಗೆ ಸಿಲುಕಿ
ಜಲಜಸಂಭವ ಮೊದಲು ಸುರರ ದೇಹವು ಸುಡಲು
ಸುಲಭದಿ ಬಾಯಲಿ ಚಪ್ಪರಿಸಿ ಉಣಲೇನೋ
ಪ್ರಲಯ ದೂರವೋ ಸ್ವಾಮಿ ಲೀಲೆ ತಿಳಿಯದೊ ಎನಗೆ. ೧ 

ಪರಮ ಭಾಗವತರು ಶುದ್ಧ ಭಾವದಿ ನಿತ್ಯ
ಪರಿಪರಿಯ ಭಕ್ಷ್ಯ ಸುಭೋಜ್ಯವ ಇಡುತಿರೆ
ನಿರುತ ತೃಪ್ತನೆ ನಿತ್ಯಾನಂದನೆ ಪ್ರೀತಿಲಿ
ಪರಮಪಾವನ್ನ ಉಣ್ಣುವ ಕಾರಣವೇನೋ.          ೨

ಅನನ್ಯ ಭಕುತಿ ಯಿಂದ ಶರಣಾದ ಸುಜನರ
ತನುಮನ ದುರಿತವ ಹೀರುವ ನೆಪವೇನೋ
ದಿನಮಣಿಪ್ರಖರಸುತೇಜನೆ ಉಗ್ರನೆ
ಎನಗಾವ ಉಪದ್ರವ ಬರದಂತೆ ಕಾಯೋ.             ೩

ದುರುಳ ರಕ್ಕಸ ತಾನೆ ಒಡೆಯನೆಂದರುಹಲು
ತರಳನ ಪೀಡಿಸಿ ಅಟ್ಟಹಾಸದಿಯಿರಲು
ವಿರಳ ರೂಪದಿ ಕೊಂದು ನಿಜಶರಣು ತಾನೆಂದು
ಸರಳ ತತ್ವವ ಜಗದಿ ಸಾರಿ ಪೇಳಲೋ ಏನೋ.      ೪

ಎನ್ನ ಭಕುತರು ಎಂದು ನಷ್ಟರಾಗರು ಪಾರ್ಥ
ಇನ್ನು ಮಾತನು ಕೊಡುವೆ ಎಂದು ಚಾಚಿದೆಯೇನೋ
ಚೆನ್ನ ಪ್ರಸನ್ನ ಅಸುರಭಂಜನ್ನ
ಎನ್ನ ಭಕುತನ ಮಾಡಿ ಕಾಯೋ ರಾಘವ ವಿಠಲ.  ೫

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT