GARUDANA HEGALERI HORATANU

ಗರುಡನ ಹೆಗಲೇರಿ ಹೊರಟಾನೊ ದೇವನು 
ಸರುವರಿಗಿಷ್ಟಾರ್ಥ ಕೊಡಲೆಂದು

ಕುಂಡಿನ ಪುರದಲ್ಲಿ ಚೆಲುವೆ ರುಕ್ಮಿಣಿಯ
ಕಂಡು ವರಿಸಲು ರಾಜರು ಬಂದಿರಲು
ದಂಡಿಸಿ ಅವರನ್ನು ನಿಜಸತಿಯ ಕೂಡಲು
ಅಂಡಜಜನಕನು ಸಿಂಗರಿಸಿಕೊಳ್ಳುತ್ತಾ.         ೧

ದೇವಮಾತೆ ಸುತನೊಡನೆ ಮೊರೆಯಿಡಲು
ದೇವದೇವನು ನರಕನ ವಧಿಸಲು
ದೇವಪ ಸತಿಯಳ ಗರ್ವವ ಮುರಿಯಲು
ದೇವ ವೃಕ್ಷವ ತಂದು ಭಾಮೆಯ ಒಲಿಸಲು.   ೨

ಸಕಲ ಸುರರು ಸಂಭ್ರಮದಿ ಸೇರಿರಲು
ಬಕುಲೆಗಿತ್ತಂಥ ಮಾತನ್ನು ನಡೆಸಲು
ಸಕಲರ ಜನನಿಯ ಪದುಮೆಯ ವರಿಸಲು
ಲಕುಮಿನಲ್ಲನು ತಾ ಸಡಗರದಿಂದಲಿ.           ೩

ಕರಿಯ ಮಕರಿಯು ಪಿಡಿದು ಪೀಡಿಸುತಿರೆ
ಪರಿಪರಿ ಸ್ತುತಿಯ ರಚಿಸಿ ಪಾಡುತಲಿರೆ
ಕರವನೆತ್ತಿ ಜಗದಾದಿ ಶರಣೆನಲು
ತ್ವರಿತದಿ ರಕ್ಷಿಸಿ ಬಿರುದನ್ನು ಉಳಿಸಲು.        ೪

ಬಗೆ ಬಗೆ ಜನಗಳು ಧಾವಿಸಿ ಬರುತಿರಲು
ಜಗದೋದ್ಧಾರ ನಿನ್ನ ಕಾಣದಾದೆವೆನಲು
ಬಗೆ ಬಗೆ ಭೂಷಣ ಮುಕುಟ ಹಾರವ ಧರಿಸಿ
ಮಿಗೆ ಹರುಷದಿಂದಲಿ ರಾಘವ ವಿಠಲನು.   ೫

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha